ತಂತ್ರವಿದ್ಯೆ -
	ಮನುಷ್ಯ ತನ್ನ ಬದುಕಿನ ಭೌತಾವಶ್ಯಕತೆಗಳನ್ನು ಪೂರೈಸಲು ನಿರ್ಮಿಸಿಕೊಂಡಿರುವ ಸಮಸ್ತ ಸಾಧನೋಪಾಯಗಳ ಮೊತ್ತ (ಟೆಕ್ನಾಲಜಿ), ಜೀವನದ ಬೇರೆಬೇರೆ ಅಗತ್ಯಗಳಿಗೆ ಸಂಬಂಧಿಸಿದಂತೆ ಬೇರೆಬೇರೆ ತಂತ್ರವಿದ್ಯೆಗಳನ್ನು ಹೆಸರಿಸುವುದು ರೂಢಿ: ಕೃಷಿ ತಂತ್ರವಿದ್ಯೆ (ಅಗ್ರಿಕಲ್ಚರಲ್ ಟೆಕ್ನಾಲಜಿ), ಆಹಾರ ತಂತ್ರವಿದ್ಯೆ (ಫುಡ್ ಟೆಕ್ನಾಲಜಿ), ವಸ್ತ್ರ ತಂತ್ರವಿದ್ಯೆ (ಟೆಕ್ಸ್‍ಟೈಲ್ ಟೆಕ್ನಾಲಜಿ), ಇತ್ಯಾದಿ ನಿರ್ದಿಷ್ಟ ಪದಾರ್ಥದ ಉತ್ಪಾದನೆ ಮತ್ತು ಸಂಸ್ಕರಣಗಳಿಗೆ ಬಳಸುವ ವಿಧಾನಗಳು. ಪ್ರಕ್ರಿಯೆಗಳು ಮುಂತಾದವನ್ನು ಆ ಪದಾರ್ಥಕ್ಕೆ ಸಂಬಂಧಿಸಿದ ತಂತ್ರವಿದ್ಯೆ ಎನ್ನುವುದೂ ಉಂಟು; ಸಕ್ಕರೆ ತಂತ್ರವಿದ್ಯೆ (ಶುಗರ್ ಟೆಕ್ನಾಲಜಿ), ರಬ್ಬರ್ ತಂತ್ರವಿದ್ಯೆ (ರಬ್ಬರ್ ಟೆಕ್ನಾಲಜಿ), ಇತ್ಯಾದಿ. ಅಂತೆಯೇ ನಿರ್ದಿಷ್ಟ ಉತ್ಪಾದನೆ ವಿಧಾನ, ನಿರ್ದಿಷ್ಟ ಶಕ್ತಿಮೂಲ ಮೊದಲಾದವುಗಳಿಗೆ ಸಂಬಂಧಿಸಿದಂತೆ ಕಿಣ್ವನ ತಂತ್ರವಿದ್ಯೆ (ಫರ್ಮೆಂಟೇಷನ್ ಟೆಕ್ನಾಲಜಿ), ವೈದ್ಯುತ ತಂತ್ರವಿದ್ಯೆ (ಎಲೆಕ್ಟ್ರಿಕಲ್ ಟೆಕ್ನಾಲಜಿ) ಎಂಬ ಶಬ್ದಗಳೂ ಬಳಕೆಯಲ್ಲಿದೆ.

	ಮಾನವಕುಲದ ಇತಿಹಾಸದಲ್ಲಿ ತಂತ್ರವಿದ್ಯೆ ಬದಲಾಯಿಸುತ್ತಲೇ ಬಂದಿದೆ. ಇದು ಸದಾ ಒಂದೇ ರೀತಿ ಇರಲಿಲ್ಲ ಎಂಬುದು ಸುಸ್ಪಷ್ಟ. ಪ್ರಾರಂಭದಲ್ಲಿ ಸರಳವಾದ ಮತ್ತು ಅಷ್ಟು ಪರಿಣಾಮಕಾರಿಯಲ್ಲದ ಸಾಧನೋಪಾಯಗಳೂ ವಿಧಾನಗಳೂ ಬಳಕೆಯಲ್ಲಿದ್ದುವು. ಸುತ್ತಲ ವಸ್ತುಪ್ರಪಂಚದ ಬಗ್ಗೆ ತಮ್ಮ ತಿಳಿವಳಿಕೆ, ಅಂದರೆ ನಮ್ಮ ವೈಜ್ಞಾನಿಕ ಜ್ಞಾನ, ಅಭಿವೃದ್ಧಿಯಾಗುತ್ತ ಹೋದಂತೆ ಈ ಸಾಧನೋಪಾಯಗಳೂ ವಿಧಾನಗಳೂ ಪರಿಷ್ಕøತವಾಗುತ್ತ ಮತ್ತು ಜಟಿಲವಾಗುತ್ತ ಬಂದಿವೆ. ಅಂದರೆ ತಂತ್ರವಿದ್ಯೆಯ ಮೇಲೇರುತ್ತ ಬಂದಿದೆ. ಇದಕ್ಕೆ ವಿಜ್ಞಾನ ಹೇಗೆ ಪ್ರೇರಕವಾಗಿದೆಯೋ ಹಾಗೆಯೇ ವಿಜ್ಞಾನದ ಬೆಳೆವಣಿಗೆಗೆ ತಂತ್ರವಿದ್ಯೆಯೂ ಪ್ರೇರಕವಾಗಿದೆ. ಏಕೆಂದರೆ, ದುಡಿಮೆಯನ್ನು ಹಗುರಗೊಳಿಸುವುದಕ್ಕಾಗಿ ಪ್ರಚಲಿತ ತಂತ್ರವಿದ್ಯೆಯನ್ನು ಉತ್ತಮಪಡಿಸುವ ಮುನುಷ್ಯ ಪ್ರಯತ್ನಗಳು ಹೊಸ ವೈಜ್ಞಾನಿಕ ಸಮಸ್ಯೆಗಳನ್ನು ಮುಂದೊಡ್ಡಿ ವಿಜ್ಞಾನದ ಬೆಳೆವಣಿಗೆಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಈ ದೃಷ್ಟಿಯಲ್ಲಿ ನೋಡಿದಾಗ ಪರಸ್ಪರ ಪ್ರೇರಕಗಳಾಗಿರುವ ವಿಜ್ಞಾನ ಮತ್ತು ತಂತ್ರವಿದ್ಯೆಗಳನ್ನು ಬೇರೆ ಬೇರೆ ಎಂದು ಪರಿಗಣಿಸದೆ ವಿಜ್ಞಾನ ತಂತ್ರವಿದ್ಯೆಯನ್ನು ಒಂದೇ ಘಟಕವೆಂದು ಪರಿಗಣಿಸಿ ಈ ಸಂಯುಕ್ತ ಚಟುವಟಿಕೆಯ ಇತಿಹಾಸ ಮತ್ತು ಅಭಿವೃದ್ಧಿಯನ್ನು ಅಧ್ಯಯನ ಮಾಡುವುದು ಸಮಂಜಸ ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ.

	ಪರ್ಯಾಯ ತಂತ್ರವಿದ್ಯೆ: ಆಧುನಿಕ ತಂತ್ರವಿದ್ಯೆಯ ಪ್ರಮುಖ ಲಕ್ಷಣಗಳೆಂದರೆ ದುಡಿಮೆಗೆ ಯಂತ್ರಗಳನ್ನು ಬಳಸುವುದು ಮತ್ತು ಆ ಯಂತ್ರಗಳನ್ನು ನಡೆಸಲು ಅಜೈವಿಕ ಮೂಲಗಳಿಂದ ಒದಗುವ ಶಕ್ತಿಯನ್ನು ಬಳಸುವುದು. ಇವುಗಳ ಪರಿಣಾಮವಾಗಿ ಪ್ರಚಲಿತ ಮಾನವ ನಾಗರಿಕತೆಯಲ್ಲಿ ಕೆಲವೊಂದು ಪ್ರವೃತ್ತಿಗಳು ವೇಗೋತ್ಕರ್ಷಿತವಾಗಿ ಬೆಳೆಯುತ್ತಿವೆ.

	ಇವುಗಳ ಪೈಕಿ ಮೊದಲನೆಯದು ಖನಿಜ ಮೂಲ ಪದಾರ್ಥಗಳ ವೇಗೋತ್ಕರ್ಷಿತ ವ್ಯಯ. ಯಂತ್ರಗಳ ರಚನೆಗೆ ಲೋಹಗಳು ಬೇಕು; ಈಚೆಗೆ ಹೆಚ್ಚು ಹೆಚ್ಚಾಗಿ ಬಳಕೆಗೆ ಬರುತ್ತಿರುವ ಪ್ಲಾಸ್ಟಿಕ್ಕುಗಳ ಉತ್ಪಾದನೆಗೆ ಕಲ್ಲಿದ್ದಲು ಮತ್ತು ಪೆಟ್ರೋಲಿಯಮ್ ಬೇಕು. ಯಂತ್ರಗಳನ್ನು ನಡೆಸಲು ಅಗತ್ಯವಾಗುವ ಶಕ್ತಿಯ ಅತ್ಯಲ್ಪ ಭಾಗ ಮಾತ್ರ ಹರಿಯುವ ನೀರಿನಿಂದ ಒದಗುತ್ತಿದೆ. ಅದರ ಬಹುಭಾಗ ಒದಗುತ್ತಿರುವುದು ಪುನಃ ಕಲ್ಲಿದ್ದಲು ಮತ್ತು ಪೆಟ್ರೋಲಿಯಮ್‍ಗಳಿಂದ ಹಾಗೂ ನಿಸರ್ಗಾನಿಲದಿಂದ. ಭೂಮಿಯ ಒಡಲಲ್ಲಿರುವ ಲೋಹದ ಅದುರುಗಳ ಮತ್ತು ಫಾಸಿಲ್ ಇಂಧನಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲಿಯಮ್‍ಗಳ ದಾಸ್ತಾನು ಅಪರಿಮಿತವಾದುದೇನಲ್ಲ. ಆದರೆ ಕಳೆದ ಶತಮಾನದ ಕೊನೆಯವರೆಗೆ ಅವನ್ನು ನಾವು ಬಳಸುತ್ತಲಿದ್ದ ವೇಗವನ್ನು ಗಣನೆಗೆ ತೆಗೆದುಕೊಂಡರೆ ಈ ಪರಿಸ್ಥಿತಿ ಎಂದೆಂದಿಗೂ ಹೀಗೆಯೇ ಮುಂದುವರಿಯಬಹುದೇನೋ ಅನ್ನಿಸುತ್ತಿತ್ತು. ಪರಿಣಾಮವಾಗಿ, ಖನಿಜ ಪದಾರ್ಥಗಳ ದಾಸ್ತಾನು ಅಪರಿಮಿತ ಎಂಬ ಭ್ರಾಂತಿ ನಮ್ಮನ್ನು ಆವರಿಸಿತ್ತು. ಆದರೆ ಈ ಶತಮಾನದಲ್ಲಿ ಅವುಗಳ ಬಳಕೆ ಅತಿ ವೇಗೋತ್ಕರ್ಷಿತವಾಗಿ ಹೆಚ್ಚುತ್ತಿರುವುದರಿಂದ ಪರಿಮಿತ ಪ್ರಮಾಣದಲ್ಲಿರುವ ಖನಿಜ ಪದಾರ್ಥಗಳನ್ನು ನಾವು ದುಂದುಮಾಡುತ್ತಿದ್ದೇವೆಂಬ ಅರಿವು ನಮಗೆ ಉಂಟಾಗುತ್ತಿದೆ.

	ಇಂದಿನ ನಾಗರಿಕತೆಯಲ್ಲಿ ಕಾಣಬರುತ್ತಿರುವ ಎರಡನೆಯ ಪ್ರವೃತ್ತಿ ಮಾನವ ವಸತಿಯ ನಗರೀಕರಣ. ಯಂತ್ರಸ್ಥಾವರಗಳ ಅಭಿವೃದ್ಧಿಗೆ ಅಗತ್ಯವಾದ ಸಾರಿಗೆ ವ್ಯವಸ್ಥೆ, ನೀರಿನ ಸರಬರಾಜು, ಕಾರ್ಮಿಕ ವರ್ಗ ಮುಂತಾದ ಸೌಕರ್ಯಗಳು ಎಲ್ಲಿ ಸುಲಭವಾಗಿ ದೊರೆಯುವುವೋ ಅಲ್ಲಿ ಹೊಸ ಯಂತ್ರಸ್ಥಾವರಗಳ ಸ್ಥಾಪನೆಯಾಗುವುದು ಸಹಜ. ಅಂದರೆ ಸುಸ್ಥಾಪಿತ ಯಂತ್ರಸ್ಥಾವರಗಳ ನೆರೆಹೊರೆಯಲ್ಲಿಯೇ ಹೊಸ ಯಂತ್ರಸ್ಥಾವರಗಳೂ ನೆಲೆಗೊಳ್ಳುವುವು. ಪರಿಣಾಮವಾಗಿ ನಗರಗಳು ಬೆಳೆಯುತ್ತವೆ, ಹಳ್ಳಿಗಾಡಿನಿಂದ ಜನ ನಗರಗಳಿಗೆ ವಲಸೆ ಹೋಗುತ್ತಾರೆ.

	ಈ ಎರಡು ಪ್ರವೃತ್ತಿಗಳ ಫಲ ಎಂದು ಪರಿಗಣಿಸಬಹುದಾದ ಮೂರನೆಯ ಪ್ರವೃತ್ತಿ ಎಂದರೆ ಮಾನವಪರಿಸರದ ಮಾಲಿನ್ಯ. ನಗರದಲ್ಲಿ ಹೆಚ್ಚುತ್ತಿರುವ ಜನಸಂದಣಿಯ ಫಲವಾಗಿ ಮತ್ತು ಕೈಗಾರಿಕೋದ್ಯಮಗಳು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಕಲ್ಲಿದ್ದಲು ಮತ್ತು ಪೆಟ್ರೋಲಿಯಮ್ ಉತ್ಪನ್ನಗಳನ್ನು ದಹಿಸುತ್ತಿರುವ ಫಲವಾಗಿ ವಾಯುಮಂಡಲವೂ ಜಲಮೂಲಗಳೂ ಅನಪೇಕ್ಷಣೀಯ ರಾಸಾಯನಿಕಗಳಿಂದ ಮಲಿನವಾಗುತ್ತಿವೆ. ಹೊಲಗದ್ದೆಗಳಲ್ಲಿ ಬಳಸುತ್ತಿರುವ ಕೀಟನಾಶಕಗಳು, ಸಾಬೂನಿನ ಬದಲು ಉಪಯೋಗಿಸುತ್ತಿರುವ ಡಿಟರ್ಜೆಂಟ್‍ಗಳು ಮುಂತಾದ ಕೃತಕ ರಾಸಾಯನಿಕಗಳೂ ಪರಿಸರದ ಮಲಿನತೆಗೆ ಇಂಬುಗೊಡುತ್ತಿವೆ. ಈಚೆಗೆ ಶಕ್ತಿ ಉತ್ಪಾದನೆ ಬಳಸುತ್ತಿರುವ ಇನ್ನೊಂದು ಸಾಧನವಾದ ಪರಮಾಣು ರಿಯಾಕ್ಟರುಗಳಾದರೋ ವಿಕಿರಣಪಟುತ್ವಯುತ ಹಾನಿಕರ ಪದಾರ್ಥಗಳನ್ನೇ ಉತ್ಪತ್ತಿ ಮಾಡಿ ನಮ್ಮ ಪರಿಸರವನ್ನು ಕಲುಷಿತಗೊಳಿಸುತ್ತಿದೆ.

	ಸಂಪನ್ಮೂಲಗಳ ದುಂದು, ಮಾನವಜೀವನದ ನಗರೀಕರಣ, ಪರಿಸರದ ಮಲಿನತೆ-ಇವು ಯಾವ ನಿರ್ಬಂಧವೂ ಇಲ್ಲದೆ ಇದೇ ರೀತಿ ಮುಂದುವರಿದದ್ದೇ ಆದರೆ ಮನುಷ್ಯಕುಲಕ್ಕೆ ಭಾರೀ ವಿಪತ್ತು ಖಂಡಿತ ಎಂದೂ ಆದ್ದರಿಂದ ವಿಜ್ಞಾನ ಮತ್ತು ತಂತ್ರವಿದ್ಯೆ ಈಗ ತುಳಿಯುತ್ತಿರುವ ಜಾಡನ್ನು ಕೈಬಿಟ್ಟು ಬೇರೊಂದು ದಿಕ್ಕಿನಲ್ಲಿ ಸಾಗುವುದು ಅನಿವಾರ್ಯ ಎಂದೂ ಅನೇಕ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಬರಲಿರುವ ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರವಿದ್ಯೆಯ ಸ್ವರೂಪ ಗುರುತಿಸಲಾರದಷ್ಟು ಬದಲಾಯಿಸಿಬಿಡುವುದು ಎಂಬುದು ಅವರ ನಿರೀಕ್ಷೆ. ಭವಿಷ್ಯದ ಈ ತಂತ್ರವಿದ್ಯೆಯನ್ನು ಬೇರೆಬೇರೆಯವರು ಬೇರೆಬೇರೆ ಹೆಸರಿನಿಂದ ಕರೆಯುತ್ತಿದ್ದಾರೆ; ಪರ್ಯಾಯ ತಂತ್ರವಿದ್ಯೆ (ಆಲ್ಟರ್ನೆಟಿವ್ ಟೆಕ್ನಾಲಜಿ), ಮಧ್ಯವರ್ತಿ ತಂತ್ರವಿದ್ಯೆ (ಇಂಟರ್‍ಮಿಡಿಯೇಟ್ ಟೆಕ್ನಾಲಜಿ), ಸಮುಚಿತ ತಂತ್ರವಿದ್ಯೆ (ಅಪ್ರೋಪ್ರಿಯೇಟ್ ಟೆಕ್ನಾಲಜಿ), ಇತ್ಯಾದಿ.

	ತಜ್ಞರು ಕನಸು ಕಾಣುತ್ತಿರುವ ಈ ತಂತ್ರವಿದ್ಯೆಗಳ ಹೆಸರುಗಳೂ ಅವರ ಕಲ್ಪನೆಯ ವಿವರಗಳೂ ಸ್ವಲ್ಪಮಟ್ಟಿಗೆ ಬೇರೆಬೇರೆಯಾಗಿವೆಯಾದರೂ ಅವೆಲ್ಲ ಒಂದೇ ತತ್ತ್ವದ ಆಧಾರದ ಮೇಲೆ ರೂಪುಗೊಂಡಂಥವು. ಅದನ್ನು ಒಂದೇ ಮಾತಿನಲ್ಲಿ ಹೇಳಬಹುದಾದರೆ ಇನ್ನು ಮುಂದೆ ವಿಜ್ಞಾನ ಮತ್ತು ತಂತ್ರವಿದ್ಯೆಯ ಗುರಿ ಇದುವರೆಗೂ ಇದ್ದಂತೆ ನಿಸರ್ಗದ ಮೇಲೆ ಪ್ರಭುತ್ವ ಸ್ಥಾಪಿಸಿ ಅದನ್ನು ನಮ್ಮ ಅನುಕೂಲಕ್ಕೆ ಅಳವಡಿಸಿಕೊಳ್ಳುವುದಲ್ಲ. ಬದಲು, ಮಾನವಜೀವನ ಮತ್ತು ನಿಸರ್ಗ ವ್ಯಾಪಾರಗಳ ನಡುವೆ ಹೊಂದಾಣಿಕೆಯನ್ನು ಏರ್ಪಡಿಸುವುದು ಆಗಿರಬೇಕು.

	ಈ ತತ್ತ್ವವನ್ನು ಅಂಗೀಕರಿಸಿದ ಒಡನೆ ಭವಿಷ್ಯದ ಚಿತ್ರದ ಕೆಲವು ಅಂಶಗಳೇನೋ ಸ್ಪಷ್ಟವಾಗುವುವು. ಪರಿಮಿತ ಪ್ರಮಾಣದಲ್ಲಿ ದೊರಕುವ ಖನಿಜ ಸಂಪನ್ಮೂಲಗಳ ದುಂದುಗಾರಿಕೆಯನ್ನು ನಿಲ್ಲಿಸುವುದು ನಮ್ಮ ಮೊದಲನೆಯ ಕರ್ತವ್ಯ. ಅಂದರೆ, ಪೆಟ್ರೋಲಿಯಮ್, ಕಲ್ಲಿದ್ದಲು ಮುಂತಾದ ಖನಿಜ ಇಂಧನಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಅಪರಿಮಿತ ಶಕ್ತಿ ಆಕರಗಳಾದ ಬಿಸಿಲು ಮತ್ತು ಬೀಸುವ ಗಾಳಿಗಳ ಮರೆಹೋಗಬೇಕು. ಅಂತೆಯೇ ಖನಿಜಮೂಲ ಪದಾರ್ಥಗಳ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ ಪುನರುತ್ಪಾದನೆಗೆ ಅವಕಾಶವಿರುವ ಸಸ್ಯಮೂಲ ಮತ್ತು ಪ್ರಾಣಿಮೂಲ ಪದಾರ್ಥಗಳ ಬಳಕೆಯನ್ನು ಹೆಚ್ಚಿಸಬೇಕು. ಪರಿಣಾಮವಾಗಿ ದೊಡ್ಡದೊಡ್ಡ ಉತ್ಪಾದನ ಸ್ಥಾವರಗಳನ್ನು ಕೆಲವೇ ಸ್ಥಳಗಳಲ್ಲಿ ಸ್ಥಾಪಿಸುವ ಕೇಂದ್ರೀಕರಣ ನೀತಿಯನ್ನು ಕೈಬಿಟ್ಟು ಅನೇಕ ಚಿಕ್ಕ ಚಿಕ್ಕ ಸ್ಥಾವರಗಳನ್ನು ವಿರಳವಾಗಿ ಹರಡಿ ಹಂಚುವ ವಿಕೇಂದ್ರೀಕರಣ ನೀತಿಯನ್ನು ಅನುಸರಿಸಬೇಕಾಗುವುದು. ಉತ್ಪಾದನೆಯ ವಿಧಾನಗಳನ್ನು ಸೂಕ್ತ ರೀತಿಯಲ್ಲಿ ಮಾರ್ಪಡಿಸಿ ದೂರದೂರದಿಂದ ತರಿಸಿಕೊಳ್ಳಬೇಕಾಗುವ ಕಚ್ಚಾಪದಾರ್ಥಗಳನ್ನು ಅವಲಂಬಿಸದೆ ಸ್ಥಳದಲ್ಲೇ ಸಿಕ್ಕುವ ಪದಾರ್ಥಗಳನ್ನು ಬಳಸಿಕೊಳ್ಳಬೇಕಾಗುವುದು. ಆಗ ಜನ ಹಳ್ಳಿಗಾಡಿನಿಂದ ನಗರಪ್ರದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿ ನಿಂತು ಜನನಿಬಿಡತೆ ಒಂದೇ ಸಮವಾಗಿ ಹಂಚಿಕೊಳ್ಳುವಂತಾಗುವುದು.

	ಈ ದಿಶೆಯಲ್ಲಿ ರಚನಾತ್ಮಕ ಚಿಂತನೆ ಮಾಡುತ್ತಿರುವ ಮತ್ತು ಅದಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ವೈಜ್ಞಾನಿಕ ಮತ್ತು ತಾಂತ್ರಿಕ ಸಮಸ್ಯೆಗಳ ಕಡೆ ಲಕ್ಷ ಹರಿಸುತ್ತಿರುವ ತಜ್ಞರ ತಂಡಗಳು ಪ್ರಪಂಚದ ನಾನಾಕಡೆ ಹುಟ್ಟಿಕೊಂಡಿದೆ. ಎಥಿಯೋಪಿಯದ ಆಡಿಸ್ ಅಬಾಬ ವಿಶ್ವವಿದ್ಯಾಲಯದಲ್ಲಿನ ಕೆಲಸ ಮಾಡುತ್ತಿರುವ ಜಾನ್ ಮಾರ್ಗನ್, ಕ್ಯಾಲಿಫೋರ್ನಿಯ, ಕಾಸ್ಪಾರಿಕ ಮತ್ತು ನ್ಯೂ ಮೆಕ್ಸಿಕೊಗಳಲ್ಲಿ ಕಾರ್ಯೋದ್ಯುಕ್ತವಾಗಿರುವ ನ್ಯೂ ಅಲೈಮಿ ಇನ್‍ಸ್ಟಿಟ್ಯೂಟಿನ ನಿರ್ದೇಶಕ ಜಾನ್‍ಟಾಡ್, ಸಾಲ್ಸ್‍ಬರ್ಗ್‍ನ ರಾಬರ್ಟ್ ಯಂಗ್, ಇಂಗ್ಲೆಂಡಿನ ರೋಬಿನ್ ಕ್ಲಾರ್ಕ್-ಇವರು ಈ ತಂಡಗಳ ಮುಂದಾಳುಗಳಲ್ಲಿ ಪ್ರಮುಖರು.

	ಭಾರತದಲ್ಲಿಯೂ ಹಲವಾರು ತಂಡಗಳು ಈ ನಿಟ್ಟಿನಲ್ಲಿ ಯೋಚಿಸುತ್ತಿವೆ. ನಮ್ಮ ರಾಷ್ಟ್ರದಂಥ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಸಮಸ್ಯೆಗೆ ಇನ್ನೂ ಹೆಚ್ಚಿನ ಔಚಿತ್ಯ ಉಂಟು. ಏಕೆಂದರೆ, ಪಾಶ್ಚಾತ್ಯ ಮಾದರಿಯ ಕೈಗಾರಿಕಾಭಿವೃದ್ಧಿಯಿಂದ ಮಾತ್ರ ರಾಷ್ಟ್ರದ ಏಳಿಗೆ ಸಾಧ್ಯ ಎಂಬ ನಂಬಿಕೆಯೇ ಈ ರಾಷ್ಟ್ರಗಳ ಆರ್ಥಿಕ ನೀತಿ ಮತ್ತು ಯೋಜನೆಗಳಿಗೆ ಆಧಾರವಾಗಿರುವಂತೆ ಕಂಡುಬರುತ್ತಿದೆ. ಆ ಮಾದರಿಯ ಕೈಗಾರಿಕಾಭಿವೃದ್ಧಿ ಅವರಿಗೇ ಉಚಿತವಾದುದಲ್ಲ ಎಂದ ಮೇಲೆ ನಮ್ಮ ಸಮಸ್ಯೆಗಳಿಗೆ ಅದು ಏನು ಪರಿಹಾರ ನೀಡೀತು?

	ನಮ್ಮ ದೇಶದ ವಿಶಿಷ್ಟ ಸಮಸ್ಯೆಗಳಿಗೆ ನಮ್ಮದೇ ಆದ ಪರಿಹಾರಗಳನ್ನು ರೂಪಿಸಿಕೊಳ್ಳಬೇಕೆಂದು ಹೊರಟಿರುವ ಕೆಲವು ವಿಜ್ಞಾನಿಗಳು ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ಒಂದು ಸಂಘವನ್ನು ಸ್ಥಾಪಿಸಿಕೊಂಡಿದ್ದಾರೆ. ಗ್ರಾಮೀಣ ಪ್ರಾಂತಗಳಿಗೆ ವಿಜ್ಞಾನ ಮತ್ತು ತಂತ್ರವಿದ್ಯೆಗಳ ಅನ್ವಯ (ಅಪ್ಲಿಕೇಷನ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಟು ರೂರಲ್ ಏರಿಯಾಸ್- ASTRA ) ಎಂಬ ಅವರ ಯೋಜನೆ ಈಗ (1977) ಕಾರ್ಯೋನ್ಮುಖವಾಗಿದೆ.
(ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ